ಶಿಡ್ಲಘಟ್ಟ
	ಭಾರತದ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕನ್ನು ಉತ್ತರಕ್ಕೆ ಬಾಗೇಪಲ್ಲಿ, ಪಶ್ಚಿಮಕ್ಕೆ ಚಿಕ್ಕಬಳ್ಳಾಪುರ, ಪೂರ್ವಕ್ಕೆ ಚಿಂತಾಮಣಿ ತಾಲ್ಲೂಕುಗಳೂ ವಾಯುವ್ಯದಲ್ಲಿ ಗುಡಿಬಂಡೆ, ನೈಋತ್ಯ ಮತ್ತು ದಕ್ಷಿಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕುಗಳೂ ಆಗ್ನೇಯದಲ್ಲಿ ಕೋಲಾರ ತಾಲ್ಲೂಕೂ ಸುತ್ತುವರಿದಿವೆ. ಜಂಗಮಕೋಟೆ, ಶಿಡ್ಲಘಟ್ಟ, ಬಸೆಟ್ಟಿಹಳ್ಳಿ ಮತ್ತು ಸಾದಳ್ಳಿ ಹೋಬಳಿಗಳು. 289 ಗ್ರಾಮಗಳಿವೆ. ವಿಸ್ತೀರ್ಣ 656.6ಚ.ಕಿಮೀ. ಜನಸಂಖ್ಯೆ 1,93,825.

	ಈ ತಾಲ್ಲೂಕು ಉತ್ತರ-ದಕ್ಷಿಣವಾಗಿ ಹಬ್ಬಿರುವ ನಂದಿದುರ್ಗ ಬೆಟ್ಟಶ್ರೇಣಿ ಮತ್ತು ದೊಡ್ಡಲಕೊಂಡ ಬೆಟ್ಟಶ್ರೇಣಿಗಳ ನಡುವೆ ಇದೆ. ತಾಲ್ಲೂಕಿನಾದ್ಯಂತ ಅನೇಕ ಬೆಟ್ಟಗುಡ್ಡಗಳು ಹರಡಿವೆ. ಇಲ್ಲಿನ ಬೆಟ್ಟಗಳಲ್ಲಿ ಭಾರಿ ಗಾತ್ರದ ಗ್ರಾನೈಟ್ ಶಿಲೆಗಳಿವೆ. ಜಿಲ್ಲೆಯ ಇತರೆಡೆಗಳಂತೆಯೇ ಈ ತಾಲ್ಲೂಕು ಕಡಿಮೆ ಮಳೆ ಬೀಳುವ ಪ್ರದೇಶ. ವಾರ್ಷಿಕ ಸರಾಸರಿ ಮಳೆ 785 ಮಿಮೀ. ಈ ತಾಲ್ಲೂಕಿನಲ್ಲಿ ಜಲಸಂಪನ್ಮೂಲ ಹೆಚ್ಚಾಗಿಲ್ಲ. ನಂದಿಬೆಟ್ಟದ ಸುತ್ತಲ ಪ್ರದೇಶದಿಂದ ಹುಟ್ಟಿ ಹರಿಯುವ ಪಾಪಾಗ್ನಿ ನದಿ ಈ ತಾಲ್ಲೂಕಿನ ಉತ್ತರ ಭಾಗದಲ್ಲಿ ಹರಿದರೆ, ದಕ್ಷಿಣಪಿನಾಕಿನಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಈ ಉಪನದಿಗಳು ಮತ್ತು ಸಣ್ಣ ತೊರೆಗಳು ಇಲ್ಲಿನ ಕೆಲವು ಕೆರೆಕಟ್ಟೆಗಳನ್ನು ತುಂಬಿ ನೀರಾವರಿಗೆ ನೆರವಾಗಿವೆ.

	ಈ ತಾಲ್ಲೂಕಿನ ಹೆಚ್ಚು ಪ್ರದೇಶ ಬರಡಾಗಿದ್ದು ಕಲ್ಲುನೆಲದಿಂದ ಕೂಡಿದೆ. ಅಲ್ಲಲ್ಲಿ ಕುರುಚಲು ಕಾಡು ಕಂಡುಬರುತ್ತದೆ. ಇಂಥ ಕಾಡುಗಳಲ್ಲಿ ಬೇವು, ಹುಣಿಸೆ, ಗಂಧ, ಜಾಲಿ, ದಿಂಡಿಗ, ಬಿಲವಾರ ಮುಂತಾದ ಮರಗಳನ್ನು ಕಾಣಬಹುದು. ತಾಲ್ಲೂಕಿನ ಉತ್ತರ ಭಾಗ ವ್ಯವಸಾಯಕ್ಕೆ ಅನುಕೂಲಕರವಾಗಿಲ್ಲ. ನೀರಾವರಿ ಪ್ರದೇಶ ಮಾತ್ರ ಫಲವತ್ತಾಗಿದೆ. ನದಿಗಳ ದಡದಲ್ಲಿ ಕಪ್ಪು ಮಣ್ಣು, ಉಳಿದೆಡೆ ಕೆಂಪುಮಣ್ಣು ಹೆಚ್ಚಾಗಿ ಕಂಡುಬರುವುದು. ತಾಲ್ಲೂಕಿನಲ್ಲಿ ಬಹಳವಾಗಿರುವ ಹೊಂಗೆಮರಗಳ ಸೊಪ್ಪನ್ನು ಗದ್ದೆಗೆ ಗೊಬ್ಬರವಾಗಿ ಬಳಸುತ್ತಾರೆ. ವಿದ್ಯುತ್ ಪಂಪು ಬಾವಿಗಳ ಬಳಕೆ ಅಧಿಕವಾಗಿದ್ದು ರಾಗಿ, ಮುಸುಕಿನ ಜೋಳ, ಹಿಪ್ಪನೇರಳೆ, ಕಬ್ಬು, ಬತ್ತ, ಜೋಳ, ನೆಲಗಡಲೆ, ಆಲೂಗೆಡ್ಡೆ ಮೊದಲಾದವುಗಳ ಜೊತೆಗೆ ಗೋದಿ, ಸಜ್ಜೆ, ಈರುಳ್ಳಿ, ಮೆಣಸಿನಕಾಯಿ, ದ್ರಾಕ್ಷಿ, ಸೀಬೆಹಣ್ಣು, ಹೊಗೆಸೊಪ್ಪು, ಬಾಳೆಹಣ್ಣು ಮತ್ತು ವಿವಿಧ ತರಕಾರಿಗಳನ್ನು ಬೆಳೆಯುತ್ತಾರೆ.

	ಈ ತಾಲ್ಲೂಕಿನ ಮೇಲೂರಿನಲ್ಲಿ ರೇಷ್ಮೆಗೂಡುಗಳಿಂದ ರೇಷ್ಮೆ ತೆಗೆಯುವ ಕಾರ್ಖಾನೆಯಿದೆ. ಪಲಚಾರ್ಲು ಮತ್ತು ಬೈಗಾನಹಳ್ಳಿಗಳಲ್ಲಿ ಪಿಂಗಾಣಿಮಣ್ಣು ತೆಗೆಯುವ ಗಣಿಗಳಿವೆ. ಕೈಮಗ್ಗ ಇಲ್ಲಿನ ಇನ್ನೊಂದು ಪ್ರಮುಖ ಗೃಹಕೈಗಾರಿಕೆ. ಕಂಬಳಿ, ಸೀರೆ, ಹತ್ತಿಬಟ್ಟೆ, ಗಾಜಿನ ಬಳೆ, ಊದುಬತ್ತಿ, ಬಿದಿರಿನ ಸಾಮಾನು, ಬೆಲ್ಲ, ರೇಷ್ಮೆನೂಲು, ಮಣ್ಣಿನ ಸಾಮಾನು-ಇವುಗಳ ತಯಾರಿಕೆ ಮತ್ತು ಜೇನುಸಾಕಣೆ ಇದೆ.

	ಈ ತಾಲ್ಲೂಕಿನಲ್ಲಿ ಮಾರ್ಗಸಂಪರ್ಕ ಉತ್ತಮವಾಗಿದ್ದು ಬೆಂಗಳೂರು-ಕಡಪ ರಾಜ್ಯ ಹೆದ್ದಾರಿ ಈ ತಾಲ್ಲೂಕಿನ ಜಂಗಮಕೋಟೆಯ ಮೂಲಕ ಹಾದುಹೋಗುತ್ತದೆ. ಜಿಲ್ಲೆಯ ಮುಖ್ಯ ಮಾರ್ಗವಾದ ಮುಳಬಾಗಲು-ಗೌರಿಬಿದನೂರು ರಸ್ತೆ ಶಿಡ್ಲಘಟ್ಟದ ಮೂಲಕ ಹಾದುಹೋಗುತ್ತದೆ. ಶಿಡ್ಲಘಟ್ಟದಿಂದ ಚಿಂತಾಮಣಿ, ಚಿಕ್ಕಬಳ್ಳಾಪುರ, ಸಾದಲಿ, ಜಂಗಮಕೋಟೆ ಮತ್ತು ಸುತ್ತಲ ಮುಖ್ಯ ಊರುಗಳಿಗೆ ಒಳ್ಳೆಯ ರಸ್ತೆ ಸಂಪರ್ಕವಿದೆ. ತಾಲ್ಲೂಕಿನ ಮಧ್ಯದಲ್ಲಿ ಬೆಂಗಳೂರು-ಚಿಂತಾಮಣಿ ನ್ಯಾರೋಗೇಜ್ ರೈಲುಮಾರ್ಗವಿದೆ. ಶಿಡ್ಲಘಟ್ಟ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿಕ್ಕಬಳ್ಳಾಪುರ-ಚಿಂತಾಮಣಿ ಇವುಗಳ ಮಧ್ಯದಲ್ಲಿರುವ ಒಂದು ರೈಲುನಿಲ್ದಾಣ. ಕೋಲಾರದ ವಾಯುವ್ಯಕ್ಕೆ 48 ಕಿಮೀ ದೂರದಲ್ಲಿದೆ. ಜನಸಂಖ್ಯೆ 41,105. ಇಲ್ಲಿ ರೇಷ್ಮೆಗೂಡಿನ ನಿಯಂತ್ರಿತ ಮಾರುಕಟ್ಟೆಯಿದೆ. ಪಟ್ಟಣ ಪುರಸಭಾ ಆಡಳಿತಕ್ಕೆ ಸೇರಿದೆ.

	ಸ್ಥಳಚರಿತ್ರೆಯ ಪ್ರಕಾರ ಉಜನಿ ಪಟ್ಟಣದಿಂದ ಕೆಂಪೇಗೌಡ ತನ್ನ ಗರ್ಭಿಣಿ ಹೆಂಡತಿ ಹಲಸೂರಮ್ಮನೊಡನೆ ಶಿಡ್ಲಘಟ್ಟದ ಉತ್ತರಕ್ಕಿರುವ ಅಬ್ಲೋಡು ಎಂಬಲ್ಲಿಗೆ ಬಂದು ನೆಲಸಿದ. ವೆಲ್ಲೂರಿನ ದಂಡಯಾತ್ರೆಯಲ್ಲಿ ಆತ ನಿಧನನಾಗಲು, ಆತನ ಹೆಂಡತಿ ಗುಪ್ತನಿಧಿಯ ಸಹಾಯದಿಂದ ಅಬ್ಲೋಡಿನಲ್ಲಿ ಕೋಟೆ ಕಟ್ಟಿಸಿ ಅಕ್ಕಪಕ್ಕದ ಪ್ರದೇಶಗಳನ್ನು ವಶಪಡಿಸಿಕೊಂಡು ಆಳತೊಡಗಿದಳು. ಅನಂತರ ಆಕೆ ತನ್ನ ಮಾವ ಶಿಡ್ಲಗೌಡನ ಹೆಸರಿನಲ್ಲಿ ಶಿಡ್ಲಘಟ್ಟವನ್ನು 1526ರಲ್ಲಿ ಸ್ಥಾಪಿಸಿದಳು. ಶಿವನೇಗೌಡ ಎಂಬುವವನು 1529ರಲ್ಲಿ ಪಟ್ಟಕ್ಕೆ ಬಂದು 47 ವರ್ಷ ಕಾಲ ಈ ಊರನ್ನು ಆಳಿದ. ಈ ಊರಿನ ನೈಋತ್ಯಕ್ಕಿರುವ ಅಮ್ಮನಕೆರೆಯನ್ನು ಹಲಸೂರಮ್ಮನೂ ಆಗ್ನೇಯಕ್ಕಿರುವ ಗೌಡನ ಕೆರೆಯನ್ನು ಶಿವನೇಗೌಡನೂ ಕಟ್ಟಿಸಿದರೆಂದು ಪ್ರತೀತಿ. ಅಮ್ಮನಕೆರೆಯ ಸಮೀಪದಲ್ಲಿಯೇ ಶಿವನೇಗೌಡ ಮತ್ತು ಆತನ ಹೆಂಡತಿಯ ಸಮಾಧಿಗಳಿವೆ. ಶಿವನೇಗೌಡನ ಅನಂತರ ಅವನ ಮಗ ಇಮ್ಮಡಿ ಶಿವನೇಗೌಡ 1576ರಿಂದ ಸು. 40 ವರ್ಷ ಈ ಊರನ್ನು ಆಳಿದ. ಅನಂತರ ಇದು ಮರಾಠರ ಮತ್ತು ಮೊಗಲರ ವಶವಾಯಿತು. 1762ರಲ್ಲಿ ಹೈದರ್ ಅಲಿ ಆಕ್ರಮಿಸಿಕೊಂಡು, ಇಲ್ಲಿಯ ಕೋಟೆಯನ್ನು ನಾಶಮಾಡಿದ.						
	(ಎ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ